ಡಿಸೆಂಬರ್ 31ರಂದು ಚಿತ್ರರಂಗ ಬಂದ್ ಇಲ್ಲ: ರಾಜ್ಯ ಬಂದ್‌ಗೆ ನೈತಿಕ ಬೆಂಬಲ

ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜ ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡಾಟಿಕೆ ವಿರುದ್ಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಚಿತ್ರರಂಗ ಸಹ ಅಂದು ಬಂದ್ ಆಚರಿಸಲಿದೆ ಎನ್ನಲಾಗಿತ್ತು. ಆದರೆ ಬಂದ್ ಆಚರಿಸುವ ಬದಲಿಗೆ ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡುವ ಪ್ರಕಟಣೆಯನ್ನು ಮಾಡಲಾಗಿದೆ.

ಡಿಸೆಂಬರ್ 31ರಂದು ಚಿತ್ರರಂಗ ಬಂದ್ ಆಚರಿಸಿ, ಚಿತ್ರೀಕರಣ, ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆ ಎಂಬ ಬಗ್ಗೆ ನಿರ್ಣಯಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸಭೆ ನಡೆದು, ಚಿತ್ರರಂಗದ ಚಟುವಟಿಕೆಗಳನ್ನು ಬಂದ್ ಮಾಡುವುದು ಬೇಡ. ಬದಲಿಗೆ ಚಿತ್ರರಂಗದಿಂದ ನೈತಿಕ ಬೆಂಬಲ ನೀಡೋಣವೆಂದು ಒಕ್ಕೂರಲ ನಿರ್ಣಯ ತಳೆಯಲಾಗಿದೆ.

ಡಿಸೆಂಬರ್ 31ರಂದು ಶುಕ್ರವಾರವಾಗಿದ್ದು, ಅಂದು ಕೆಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಚಿತ್ರರಂಗವು ಕೊರೊನಾದಿಂದ ಸಾಕಷ್ಟು ತತ್ತರಿಸಿದ್ದು, ಇಂಥಹಾ ಸಂಕಷ್ಟದ ಸಮಯದಲ್ಲಿ ಬಂದ್ ಆಚರಿಸುವುದು ಸೂಕ್ತವಲ್ಲವೆಂದು ವಾಣಿಜ್ಯ ಮಂಡಳಿ ಚಿತ್ರರಂಗ ಬಂದ್‌ ಮಾಡುವ ನಿರ್ಣಯದಿಂದ ಹಿಂದೆ ಸರಿದಿದೆ. ಬದಲಿಗೆ ನೈತಿಕ ಬೆಂಬಲವನ್ನಷ್ಟೆ ಘೋಷಿಸಿದೆ.

ಎರಡು ದಿನದ ಹಿಂದೆ ಮಾತನಾಡಿದ್ದ ವಾಣಿಜ್ಯ ಮಂಡಳಿ ಮುಖ್ಯಸ್ಥ ಸಾ.ರಾ.ಗೋವಿಂದು, ”ಡಿಸೆಂಬರ್ 31ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲವಿದ್ದು, ಅಂದು ಚಿತ್ರರಂಗ ಸಹ ಎಲ್ಲ ಕಾರ್ಯಚಟುವಟಿಕೆಯನ್ನು ಬಂದ್ ಮಾಡಿ ಬಂದ್‌ಗೆ ಬೆಂಬಲ ನೀಡಲಿದೆ” ಎಂದಿದ್ದರು.

ಆದರೆ ಸಾ.ರಾ.ಗೋವಿಂದು ಅವರ ಈ ಏಕಪಕ್ಷೀಯ ಹೇಳಿಕೆಯನ್ನು ಹಲವರು ಟೀಕಿಸಿದ್ದರು. ವಿಶೇಷವಾಗಿ, ‘ಲವ್ ಯು ರಚ್ಚು’ ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ, ಚಿತ್ರರಂಗ ಬಂದ್ ಅನ್ನು ಕಟುವಾಗಿ ವಿರೋಧಿಸಿದ್ದರು. ”ಡಿಸೆಂಬರ್ 31ರಂದು ಬಂದ್ ಮಾಡಿದರೆ ಅಂದು ಸಿನಿಮಾ ಬಿಡುಗಡೆ ಇಟ್ಟುಕೊಂಡಿರುವ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ. ಹೋರಾಟಗಳು ಕನ್ನಡದ ಪರವಾಗಿರಬೇಕೆ ಹೊರತು, ಕನ್ನಡಿಗರ ವಿರೋಧವಾಗಿ ಅಲ್ಲ” ಎಂದಿದ್ದರು.

ಗುರು ದೇಶಪಾಂಡೆ ಮಾತ್ರವೇ ಅಲ್ಲದೆ ಇನ್ನೂ ಕೆಲವರು ಚಿತ್ರರಂಗ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಸಾ.ರಾ.ಗೋವಿಂದು ಅವರು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದಾರೆ. ಕಲಾವಿದರ ಸಂಘ, ನಿರ್ದೇಶಕರ ಸಂಘ, ಪ್ರದರ್ಶಕ, ವಿತರಕ ಸಂಘಗಳ ಅಭಿಪ್ರಾಯವನ್ನು ಅವರು ಕೇಳಿಲ್ಲವೆಂದು ಸಹ ಆರೋಪಗಳು ಕೇಳಿ ಬಂದಿದ್ದವು.

ಇದೀಗ ಚಿತ್ರರಂಗವು ಬಂದ್ ಆಗುವುದಿಲ್ಲವೆಂಬ ಸುದ್ದಿ ಹೊರಬಿದ್ದಿದ್ದು ಡಿಸೆಂಬರ್ 31ರಂದು ಬಿಡುಗಡೆ ಆಗಲಿರುವ ಸಿನಿಮಾಗಳು ಸಂತಸದಿಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆರ್‌ಬಿಎಲ್‌ ಬ್ಯಾಂಕ್‌ನ ಹಣಕಾಸು ಸ್ಥಿತಿ ಸ್ಥಿರ

Mon Dec 27 , 2021
ಮುಂಬೈ: ‘ಆರ್‌ಬಿಎಲ್‌ ಬ್ಯಾಂಕ್‌ನ ಹಣಕಾಸು ಸ್ಥಿತಿ ಸ್ಥಿರವಾಗಿದೆ. ಠೇವಣಿದಾರರು ಮತ್ತು ಷೇರುದಾರರು ವದಂತಿಗಳಿಗೆ ಕಿವಿಗೊಟ್ಟು ಆತಂಕಪಡುವ ಅಗತ್ಯ ಇಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಹೇಳಿದೆ. ಬ್ಯಾಂಕ್‌ನ ಕೆಲವು ತ್ರೈಮಾಸಿಕಗಳ ಸಾಧನೆ ಮತ್ತು ಅದರ ಆಡಳಿತ ಮಂಡಳಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ವದಂತಿಗಳು ಹರಡುತ್ತಿರುವ ಕುರಿತು ಆರ್‌ಬಿಐ ಸ್ಪಷ್ಟನೆ ನೀಡಿದೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಶ್ವವೀರ್‌ ಅಹುಜಾ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ ಮತ್ತು ತಕ್ಷಣದಿಂದಲೇ […]

Advertisement

Wordpress Social Share Plugin powered by Ultimatelysocial