ಆರ್. ಕೆ. ಶ್ರೀಕಂಠನ್‌ ಸಂಗೀತ ಕಲಾನಿಧಿ

ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ ಎಂಬಿತ್ಯಾದಿ ಬಿರುದಾಂಕಿತರು ವಿದ್ವಾನ್‌ ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌. ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ಅತ್ಯಂತ ಹಿರಿಯ ಹೆಮ್ಮರ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಾಭಿವ್ಯಕ್ತಿ ಮತ್ತು ಮಾಧುರ್ಯಕ್ಕೆ ಇನ್ನೊಂದು ಹೆಸರು ಆರ್‌.ಕೆ. ಶ್ರೀಕಂಠನ್‌. ಲೆಕ್ಕಾಚಾರಗಳನ್ನೆಲ್ಲಾ ದಾಟಿ ತಮ್ಮದೇ ಮನೋಧರ್ಮದ ಬಣ್ಣ ತುಂಬಿದ ವರ್ಣಶಿಲ್ಪಿ! ಹಾಸನದ ಹಳ್ಳಿಯಿಂದ ಜಗತ್ತಿನಾದ್ಯಂತ ಮಿಡಿದ ದನಿ. ಕನ್ನಡ ನಾಡಿನ ಸಂಗೀತಗಾರರಲ್ಲಿ ಮೊದಲಿಗರು. ಅವರು ಸಂಗೀತ ಭಾಷೆಯನ್ನು ಮಾತೃಭಾಷೆ ಮಾಡಿಕೊಂಡವರು.
ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿ ಪಡೆದ ಶ್ರೀಕಂಠನ್‌ ಅವರು ನಡೆದ ಹಾದಿಯಲ್ಲಿ ಹಲವು ಗುರುತುಗಳಿವೆ. ಆಕಾಶವಾಣಿಯಲ್ಲಿ ಅವರ 32 ವರ್ಷಗಳ ಸೇವೆ ಕನ್ನಡಿಗರ ಎದೆಗೂಡಿನಲ್ಲಿ ಮನೆ ಮಾಡಿದೆ. ಅವರು ‘ಗಾನವಿಹಾರ’ ಕಾರ್ಯಕ್ರಮದಲ್ಲಿ ಸಂಗೀತ ಗುರುವಾಗಿ ಲಕ್ಷಾಂತರ ಕೇಳುಗರಿಗೆ ಸಂಗೀತ ಪಾಠ ಮಾಡಿದವರು. ಪುರಂದರದಾಸರ ಕೃತಿಗಳಿಗೆ ಅವರು ಕೊಟ್ಟ ಸ್ವರೂಪ ಮಹತ್ವದ ಮೈಲುಗಲ್ಲು. ಕೆಸೆಟ್‌ ಮೂಲಕ ಮನೆ ಮನೆ ತಲುಪಿದವರು. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡಮಿಯಲ್ಲಿ ಸದಸ್ಯರಾಗಿ ಕಾರ್ಯ ಮಾಡಿದವರು. ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಮದ್ರಾಸ್‌ ಸಂಗೀತಗಾರರ ಆರ್ಭಟದ ನಡುವೆ, ಹಿಂದೂಸ್ತಾನಿ ಸಂಗೀತದ ಅಲೆಯಲ್ಲಿ ಈಜಿ ಒಬ್ಬ ಪರಿಪೂರ್ಣ ಸಂಗೀತ ವಿದ್ವನ್ಮಣಿಯಾಗಿ ಹೊರಹೊಮ್ಮಿದವರು.
ಆರ್‌.ಕೆ. ಶ್ರೀಕಂಠನ್‌ ಅವರು ಹುಟ್ಟಿದ್ದು ಮಕರ ಸಂಕ್ರಾಂತಿಯ ದಿನ. 1920ರ ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಅವರ ಜನನವಾಯ್ತು. ಅವರು ಬದುಕಿದ್ದ ತೊಂಭತ್ನಾಲ್ಕು ವರ್ಷಗಳಲ್ಲಿ ಸುಮಾರು 90 ವರ್ಷಗಳನ್ನು ಸಂಗೀತದಲ್ಲೇ ಜೀವಿಸಿದ್ದರು. 2014ರ ಫೆಬ್ರುವರಿ 17ರಂದು ಅವರು ನಿಧನರಾಗುವುದಕ್ಕೆ ಕೆಲವು ತಿಂಗಳ ಹಿಂದೆ ಸಹಾ ಅವರು ಮೈಸೂರಿನಲ್ಲಿ ಪೂರ್ಣಪ್ರಮಾಣದ ಕಛೇರಿ ನಡೆಸಿಕೊಟ್ಟಿದ್ದರು.
ಆರ್‌.ಕೆ. ಶ್ರೀಕಂಠನ್‌ ಅವರ ಕುಟುಂಬದಲ್ಲಿ ವೇದ, ಸಂಸ್ಕೃತ, ಸಂಗೀತ, ಸಾಹಿತ್ಯ, ಲಾಲಿತ್ಯಗಳೇ ತುಂಬಿವೆ. ತಂದೆ ಆರ್‌. ಕೃಷ್ಣಶಾಸ್ತ್ರಿಗಳು ಬಹುಶೃತ ವಿದ್ವಾಂಸರು. ಗಮಕಿ, ಹರಿಕಥಾ ವಿದ್ವಾಂಸರು ಹಾಗೂ ಕವಿಗಳೂ ಕೂಡ. ಆರ್‌.ಕೆ. ಶ್ರೀಕಂಠನ್‌ ಅವರಿಗೆ ತಂದೆಯೇ ಮೊದಲ ಗುರು. ನಂತರ ಅಣ್ಣ ಆರ್‌.ಕೆ. ವೆಂಕಟರಮಣ ಶಾಸ್ತ್ರಿ ಗುರುವಾದರು. ಅಣ್ಣನ ಆಶ್ರಯದಲ್ಲಿ ಶ್ರೀಕಂಠನ್‌ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡರು.
ಆರ್‌.ಕೆ. ಶ್ರೀಕಂಠನ್‌ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ವಿದ್ವಾಂಸರು. ವಾಲಾಜಪೇಟೆ ವೆಂಕಟರಮಣ ಭಾಗವತರು ತ್ಯಾಗರಾಜರ ನೇರ ಶಿಷ್ಯರು. ಮೈಸೂರು ಸದಾಶಿವರಾಯರು ಭಾಗವತರ ಶಿಷ್ಯರು. ರಾಯರ ಶಿಷ್ಯರು ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣ. ಶೇಷಣ್ಣರಿಗೆ ಶ್ರೀಕಂಠನ್‌ ಅವರ ಅಣ್ಣ ವೆಂಕಟರಮಣ ಶಾಸ್ತ್ರೀ ಶಿಷ್ಯರು. ಅಣ್ಣನ ಶಿಷ್ಯರು ಆರ್‌.ಕೆ. ಶ್ರೀಕಂಠನ್‌. ಅವರ ಮೂಲ ಮೂಲಪುರುಷನಲ್ಲಿಗೇ ಹೋಗಿ ನಿಲ್ಲುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಎಂ.ಶಿವರಾಂ ಮಹಾನ್ ಸಾಹಿತಿ.

Sat Jan 14 , 2023
ವೃತ್ತಿಯಲ್ಲಿ ವೈದ್ಯರಾದ ಡಾ. ಎಂ. ಶಿವರಾಂ ಪ್ರವೃತ್ತಿಯಲ್ಲಿ ಲೇಖಕರಾಗಿ ರಾ.ಶಿ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. “ನನ್ನ ಹೆಸರಿನ ಎರಡು ಪದಗಳ ಪ್ರಥಮಾಕ್ಷರಗಳನ್ನು ತಿರುವು ಮುರುವು ಮಾಡಿ ‘ರಾ.ಶಿ’ ಎಂದಿಟ್ಟುಕೊಂಡೆ” ಎಂಬುದು ಅವರದೇ ಹೇಳಿಕೆ. ಅವರು ಜನಿಸಿದ ದಿನ ನವೆಂಬರ್ 10, 1905.ನಗಲು ಬರದೆ ಮುಗುಮ್ಮಾಗಿ ಕುಳಿತಿದ್ದ ಕನ್ನಡಿಗರಿಗೆ ತಮ್ಮ ‘ಕೊರವಂಜಿ’ ಮಾಸಪತ್ರಿಕೆಯ ಮುಖಾಂತರ ನಗಲು ಕಲಿಸಿಕೊಟ್ಟವರು ರಾಶಿ. ಅಪಾರ ಅರಿವಿನ ಖನಿಯಾಗಿದ್ದರೂ ಅಹಂಕಾರದ ಸೋಂಕಿರಲಿಲ್ಲ. ಬೆಂಗಳೂರು ಮೆಡಿಕಲ್ ಕಾಲೇಜು ಉಗಮಕ್ಕೆ […]

Advertisement

Wordpress Social Share Plugin powered by Ultimatelysocial